ಭಾವ ಬಿಂದು

Saturday, August 26, 2006

ಸತ್ಯ-ಮಿಥ್ಯಗಳ ನಡುವೆ
ಭಾಗ - ೧

ನಡೆಯುತ್ತಿದ್ದವಳ ಕಾಲಿಗೆ ತೊಡರಿದ್ದೇನೆಂದು ಬಗ್ಗಿ ನೋಡಿದೆ. ಚಪ್ಪಲಿಯ ಮುಂಭಾಗದ ಮೇಲೆ ಬೆರಳುಗಳ ಮುಂದೆ ಸರ ಸಿಕ್ಕಿಹಾಕಿಕೊಂಡಿತ್ತು. ಬಗ್ಗಿ ಚಪ್ಪಲಿಯಿಂದ ಬಿಡಿಸಿನೋಡಿದರೆ, ಮಣ್ಣಿನಲ್ಲಿ ಹೂತಿದ್ದ ಮಾಂಗಲ್ಯದ ಸಮೇತ ಕೈಗೆ ಸರ ಬಂತು. ಒಂದು ಕ್ಷಣ ಅಕ್ಕಪಕ್ಕ ನೋಡಿದೆ. ತೀರ ಸನಿಹದಲ್ಲಿ ಯಾರೂ ಇರಲಿಲ್ಲ. ಬೆಳಗಿನ ಐದೂವರೆಯ ಸಮಯ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಬೆಳಗಿನ ವಾಕಿಂಗಿಗೆ ಹೊರಟವರು, ಸೈಕಲ್ ಮೇಲಿನ ಪೇಪರಿನ ಹುಡುಗರು ಬಿಟ್ಟರೆ ರಸ್ತೆ ಪ್ರಶಾಂತವಾಗಿತ್ತು.

ಕೈಯಲ್ಲಿ ಸರ ಇತ್ತು. ಅದಕ್ಕಂಟಿದ್ದ ಮಣ್ಣು ಕೊಡವಿ, ಒಂದು ಕ್ಷಣ ಏನು ಮಾಡುವುದೆಂದು ಯೋಚಿಸಿದೆ. ಯಾರದೋ ಏನೋ, ಕಳೆದುಕೊಂಡವರು ಎಷ್ಟು ಬೇಸರ ಮಾಡಿಕೊಂಡಿರಬಹುದೋ? ತೀರ ನಮ್ಮಂತಹ ಮಧ್ಯಮ ವರ್ಗದವರಾದರೆ ಎಷ್ಟು ಕಣ್ಣೀರಿಡುತ್ತಿರಬಹುದು?

ಆದರೆ ಈಗಿನ್ನೂ ಬೆಳಗಿನ ಆರು ಗಂಟೆಯೂ ಆಗಿಲ್ಲ. ಕಳೆದುಕೊಂಡವರೂ ಸಹ ಬೆಳಗಿನ ವಾಕಿಂಗಿಗೇ ಬಂದಿರಬಹುದು ಇಲ್ಲಾ ರಾತ್ರಿ ಜನ ಸಂಚಾರ ಕಡಿಮೆಯಾದಮೇಲೆ ಬೀಳಿಸಿಕೋಡಿರಬಹುದು.

ಸರವನ್ನು ಕೈಲಿ ಹಿಡಿದುಕೊಂಡೇ ನಿಧಾನವಾಗಿ ನಡೆಯಲಾರಂಭಿಸಿದೆ. ಅಕಸ್ಮಾತ್ ಬೆಳಿಗ್ಗೆಯೇ ಬೀಳಿಸಿಕೊಂಡಿದ್ದರೆ, ಇಷ್ಟರಲ್ಲಿ ಆಕೆಗೆ ಗೊತ್ತಾಗಿ ಇದೇ ದಾರಿಯಲ್ಲೇನಾದರೂ ಹುಡುಕುತ್ತಿದ್ದರೆ ಅಂತಹವರು ಕಣ್ಣಿಗೆ ಬಿದ್ದರೂ ಬೀಳಬಹುದು ಎಂದು ಕೊಂಡು ಮತ್ತೆ ಮತ್ತೆ ಹಿಂದಿರುಗಿ ನೋಡುತ್ತಾ ಬಂದರೆ, ಮನೆ ಹತ್ತಿರ ಬಂದರೂ ಅಂತಹವರು ‍ಯಾರೂ ಕಾಣಿಸಲಿಲ್ಲ.

ಬೀಗ ತೆರೆದುಕೊಂಡು ಒಳಬಂದರೆ ಗಡಿಯಾರ ಆರು ಗಂಟೆ ತೋರಿಸಿತ್ತಿದೆ. ಗಂಡ ಇನ್ನೂ ಮಲಗಿರುತ್ತಾರೆ. ಕೈಕಾಲಿನ ಜೊತೆ ಮಣ್ಣಾಗಿದ್ದ ಸರವನ್ನು ಚೆನ್ನಾಗಿ ತೊಳೆದು ಕಪಾಟಿನ ಮೇಲಿರಿಸಿ ಸೀದಾ ಅಡಿಗೆಮನೆಗೆ ನಡೆದು ಕಾಫಿ ಬೆರೆಸಿ ಎರಡು ಲೋಟಕ್ಕೆ ಬಗ್ಗಿಸಿ ತಂದು ರಘುವನ್ನೆಬ್ಬಿಸಿದೆ.

"ಆಗಲೇ ಬೆಳಗಾಯಿತಾ? ಗಂಟೆ ಎಷ್ಟು?''

"ಆರೂ ಕಾಲು, ಕಾಫಿ ತೊಗೊಳ್ಳಿ.''

"ಇನ್ನೂ ಪೇಪರ್ ಬಂದಿಲ್ಲವಾ?''

"ಇನ್ನೂ ಇಲ್ಲ.''

ಅಪಘಾತದ ನಂತರ ನಮ್ಮ ಸಂಭಾಷಣೆ ಹೀಗೇ ಯಾಂತ್ರಿಕವಾಗಿರುತ್ತೆ.

ಕಾಫಿ ಕುಡಿದ ನಂತರ ಕಪಾಟಿನ ಮೇಲಿಟ್ಟಿದ್ದ ಸರ ತಂದು ರಘುವಿಗೆ ತೋರಿಸಿದೆ.
"ಇದ್ಯಾರದು ಸರ?''
"ಬೆಳಿಗ್ಗೆ ವಾಕಿಂಗಿಗೆ ಹೋದಾಗ ಸಿಕ್ಕಿತು. ಕಾಲಿಗೆ ತೊಡರಿತು, ನೋಡಿದ್ರೆ ಮಾಂಗಲ್ಯದ ಸರ, ಯಾರದ್ದೋ, ಏನೋ?''
"ಒಳ್ಳೆ ತೂಕವಾಗಿದೆ, ನಲವತ್ತು ಗ್ರಾಂ ಆದರೂ ಇದೆ'' ಕೈಯಲ್ಲಿ ತೂಗಿಸುತ್ತಾ ಹೇಳಿದರು.
"ನಾನೂ ಆಕಡೆ ಈಕಡೆ ನೋಡುತ್ತಲೇ ಬಂದೆ, ಯಾರಾದರೂ ಹುಡುಕುತ್ತಾ ಬರಬಹುದೇನೋ ಎಂದು. ಯಾರೂ ಬರಲಿಲ್ಲ. ನನಗೂ ಸಮಯವಾಯಿತು ಬಂದುಬಿಟ್ಟೆ, ಈಗೇನು ಮಾಡೋದು?''

"ಏನು ಮಾಡ್ತೀಯಾ?''

ಸರ ತೂಗಿಸುತ್ತಲೇ ರಘು ಕೇಳಿದಾಗ ಅವರ ಮನಸ್ಸಿನಲ್ಲೇನಿದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. "ಮಾಡೋದೇನು? ಹೇಗಾದರೂ ಇದನ್ನು ಕಳೆದುಕೊಂಡವರನ್ನು ಕಂಡುಹಿಡಿಯಬೇಕು.''

"ಹೇಗೆ ಕಂಡ್ಹಿಡೀತಿಯಾ? ನನ್ನದೇ ಅಂತ ಯಾರ್‍ಯಾರೋ ಬರಬಹುದು. ಸುಮ್ಮನೆ ತಲೆ ನೋವು, ಇರೋ ತಲೆ ನೋವು ಸಾಲದೂ ಅಂತ ಇದನ್ನು ಬೇರೆ ಅಂಟಿಸಿಕೊಂಡೆ.''

"ಅಂದ್ರೇನು ಮಾಡಬೇಕಿತ್ತು? ಸರ ಅಲ್ಲೇ ಇರಲಿ ಅಂತ ಬಿಟ್ಬರಬೇಕಿತ್ತೇನು?''
"ಮತ್ತೇನು ಮಾಡ್ತೀ, ಪೋಲೀಸ್ ಗೀಲೀಸ್ ಅಂತ ಹೋದ್ರೆ ಸುಮ್ನೆ ರಾಮಾಯ್ಣ.''
"ನೋಡೋಣ ನಾನೇ ಏನಾದ್ರೂ ಯೋಚಿಸ್ತೀನಿ, ಅದ್ರ ಬಗ್ಗೆ ತಲೆ ಕೆಡಿಸಿಕೊಳ್ತಾ ಕೂರೋಕ್ಕೆ ಈಗ ಟೈಮಿಲ್ಲಾ, ನೀವು ಸ್ವಲ್ಪ ಬೇಗ ಬೇಗ ಸಹಾಯ ಮಾಡಿದ್ರೆ ಟೈಮಿಗೆ ಸರಿಯಾಗಿ ಆಫೀಸಿಗೆ ಹೋಗಬಹುದು.''
ಮುಂದುವರೆಯುವುದು.....

2 Comments:

Post a Comment

<< Home