ಭಾವ ಬಿಂದು

Monday, September 11, 2006

ಹೀಗೊಂದು ಬಿನ್ನಹ

ಕಳೆದು ಹೋಗಿದೆ
ಒಂದು ಮಗು
ಹುಡುಕ ಬೇಕಿದೆ
ಕಾಂಕ್ರೀಟು ಕಾಡಿನಲಿ
ನೂರೆಂಟು ಮಹಡಿಗಳ
ಲಿಫ್ಟು, ಸಾಫ್ಟ್‌ವೇರ್ ಯಂತ್ರಗಳ
ಕಿವಿಗಪ್ಪಳಿಸುವ
ಹಲೋ ಹೌಡುಯುಡೂಗಳ ನಡುವೆ

ಕಳೆದು ಹೋಗಿದೆ
ಒಂದು ಮಗು.
ಹುಡುಕ ಬೇಕಿದೆ,
ತಮಿಳು, ಮಲಯಾಳಂ,
ತೆಲುಗು, ಮರಾಠಿ
ನೂರೆಂಟುಗೌಜಿಗಳ ನಡುವೆ
ಕಳೆದೇ ಹೋಗುತ್ತಿದೆ.

ಕಳೆದು ಹೋಗಿದೆ
ಒಂದು ಮಗು
ಆದರಿದು ತಬ್ಬಲಿಯಲ್ಲ
ನೂರೆಂಟು ಅಕೆಡೆಮಿಗಳ,
ಜ್ಞಾನಪೀಠಗಳ,
ಋಷಿವರ್ಯರ
ಹಾರೈಕೆಯಿದೆ ಅದರ ಮೇಲೆ.

ಕಳೆದು ಹೋಗಿದೆ
ಒಂದು ಮಗು
ಅಣ್ಣಂದಿರಾ, ಅಕ್ಕಂದಿರಾ,
ಹುಡುಕುವಿರಾ
ಈ ಮುದ್ದು ಮಗುವನ್ನು?
ಈ ನಾಡಿನ ಕಣ್ಮಣಿಯನ್ನು?

6 Comments:

  • At 1:42 AM, Blogger ಮನಸ್ವಿನಿ said…

    ನಮ್ಮ ಮನದಲ್ಲಿಯೆ ಅಡಗಿ ಕುಳಿತಿದೆ...ಹುಡುಕುವುದೇನು ಬಂತು! ನಮ್ಮ ನಮ್ಮ ಆತ್ಮಾವಲೋಕನ ಮಾಡಿದಾರಯಿತು.

    ಸುಂದರ ಕವಿತೆ :)

     
  • At 6:01 PM, Blogger bhadra said…

    ನೈಜ ಸ್ಥಿತಿಯನ್ನು ಬಹಳ ಸುಂದರವಾಗಿ ಪ್ರಸ್ತಾಪಿಸಿದ್ದೀರಿ ಮೇಡಂ.

    ಒಳ್ಳೆಯದಾಗಲಿ

     
  • At 7:52 AM, Blogger Anveshi said…

    ಆ ಮಗೂನ ಅದ್ರ ಅಪ್ಪ ಅಮ್ಮ ಬಿಟ್ಹಾಕಿದ್ರೂ.... ಪಕ್ಕದ್ಮನೆ (ಪರವೂರಿನವರು- ಅಕ್ಕನ ಸಮಾವೇಶದಲ್ಲಿ) ಆಡಿಸ್ತಾ ಇದ್ದಾರೆ..

    ಬೇಗನೇ ನಾವದನ್ನು ನಮ್ಮ ನಮ್ಮ ಊರಿಗೇ ಕರೆತರಬೇಕಾಗಿದೆ...

    ಹೇಗಿದ್ರೂ ಮನಸ್ವಿನಿಯವರು ನಮ್ ಜತೆಗೆ ಹೋರಾಡೋಕ್ಕೆ ಇದ್ದಾರೆ.

     
  • At 7:31 AM, Blogger bhadra said…

    ನವೆಂಬರ್‍ವರೆವಿಗೆ ನಮ್ಮ ಮಗು ನಮ್ಮ ಕೈಗೆ ಸಿಕ್ಕೋದಿಲ್ಲ ಅನ್ನಿಸುತ್ತದೆ. ಮೇಡಂ ನಿಮ್ಮ ಬ್ಲಾಗನ್ನು ಮುಂದುವರೆಸಿ. ಹೊಸ ಸೂತ್ರಕ್ಕೆ ಕಾಯ್ತಿದ್ದೇನೆ.

     
  • At 12:44 AM, Blogger Shiv said…

    ಹೀಗೆ ಬ್ಲಾಗ್ ಲೋಕ ಸುತ್ತಾಡುವಾಗ ನಿಮ್ಮ ಭಾವ ಬಿಂದು ಕಾಣಿಸಿತು.

    ತುಂಬಾ ಸಮಯೋಚಿತವಾದ ಕವನ..
    ಮಗು ಹೇಗೆ ಇರಲಿ,ಎಲ್ಲೇ ಇರಲಿ, ನವಂಬರ್‍ನಲ್ಲಿ ಮಗುವಿನ ಹುಟ್ಟುಹಬ್ಬ ಮಾಡುವುದನ್ನ ಮಾತ್ರ ಮರೆಯುವುದಿಲ್ಲ ಈ ಜನ..

     
  • At 5:37 PM, Blogger ದೀಪಕ್ ಸೋಮಶೇಖರ said…

    ಚೆನ್ನಾಗಿದೆ. ಅಭಿನಂದನೆಗಳು.

    ಈ ಮಗು ಕಳೆದು ಹೋಗಿಲ್ಲ, ಮೌನವಾಗಿದೆ. ಮೌನ ದುರ್ಬಲತೆಯ ಸಂಕೇತವಲ್ಲ. ಈ ಪ್ರಭಾವಶಾಲಿ ಮಗು ತನ್ನ ಪ್ರಬಲತೆಯನ್ನು ಮೆರೆಯುವುದಿಲ್ಲ.

     

Post a Comment

<< Home