ಭಾವ ಬಿಂದು

Monday, September 11, 2006

ಹೀಗೊಂದು ಬಿನ್ನಹ

ಕಳೆದು ಹೋಗಿದೆ
ಒಂದು ಮಗು
ಹುಡುಕ ಬೇಕಿದೆ
ಕಾಂಕ್ರೀಟು ಕಾಡಿನಲಿ
ನೂರೆಂಟು ಮಹಡಿಗಳ
ಲಿಫ್ಟು, ಸಾಫ್ಟ್‌ವೇರ್ ಯಂತ್ರಗಳ
ಕಿವಿಗಪ್ಪಳಿಸುವ
ಹಲೋ ಹೌಡುಯುಡೂಗಳ ನಡುವೆ

ಕಳೆದು ಹೋಗಿದೆ
ಒಂದು ಮಗು.
ಹುಡುಕ ಬೇಕಿದೆ,
ತಮಿಳು, ಮಲಯಾಳಂ,
ತೆಲುಗು, ಮರಾಠಿ
ನೂರೆಂಟುಗೌಜಿಗಳ ನಡುವೆ
ಕಳೆದೇ ಹೋಗುತ್ತಿದೆ.

ಕಳೆದು ಹೋಗಿದೆ
ಒಂದು ಮಗು
ಆದರಿದು ತಬ್ಬಲಿಯಲ್ಲ
ನೂರೆಂಟು ಅಕೆಡೆಮಿಗಳ,
ಜ್ಞಾನಪೀಠಗಳ,
ಋಷಿವರ್ಯರ
ಹಾರೈಕೆಯಿದೆ ಅದರ ಮೇಲೆ.

ಕಳೆದು ಹೋಗಿದೆ
ಒಂದು ಮಗು
ಅಣ್ಣಂದಿರಾ, ಅಕ್ಕಂದಿರಾ,
ಹುಡುಕುವಿರಾ
ಈ ಮುದ್ದು ಮಗುವನ್ನು?
ಈ ನಾಡಿನ ಕಣ್ಮಣಿಯನ್ನು?

Tuesday, September 05, 2006

ಸತ್ಯ-ಮಿಥ್ಯಗಳ ನಡುವೆ
ಭಾಗ - ೩

ತಲೆ ಬಾಚಿಕೊಳ್ಳುತ್ತಿರುವಾಗಲೇ ಕನ್ನಡಿ, ಬಾಡಿದ ಕಣ್ಣುಗಳನ್ನು, ಬಾತಿದ್ದ ಕೆನ್ನೆಯನ್ನು ತೋರಿಸಿತು, ರಾತ್ರಿ
ಇಡೀ ನಿದ್ರೆಯಿಲ್ಲ. ನಿನ್ನೆ ಬೆಳಿಗ್ಗೆಯಿಂದ ಹರಿಸಿದ ಕಣ್ಣೀರಿಗೆ ಕೊನೆಯಿಲ್ಲ. ಶ್ರೀಧರ ಕೂಗುವುದು ಕೇಳಿಸುತ್ತಿದೆ, "ಶಾರೂ, ಬಾಗ್ಲ್ಹಾಕ್ಕೋ ಬಾ, ನಾನಿನ್ನು ಹೊರಡ್ತೀನಿ. ಏನು ಇನ್ನೂ ಅಳು ನಿಲ್ಲಿಸಿಲ್ವಾ? ನೋಡೋಣ ಕಂಪ್ಲೇಂಟ್ ಕೊಟ್ಟಿದ್ದೀವಲ್ಲಾ, ಇಷ್ಟರಮೇಲೆ ನಮ್ಮದು ಅಂತ ಇದ್ರೆ ಸಿಕ್ಕೇ ಸಿಗುತ್ತೆ. ಇಲ್ವಾ, ತಲೆ ಕೆಡಿಸ್ಕೋಬೇಡ, ಅದಿರಲೇ ಇಲ್ಲ ಅಂದುಕೊಂಡ್ಬಿಡೋಣ ಹೊಸ ಮಾಂಗಲ್ಯದ ಸರ ಮಾಡಿಸ್ತೀನಿ.''
ತನ್ನ ಕೆಂಪಾದ ಕಣ್ಣುಗಳನ್ನು ನೋಡಿ ಗಂಡ ಹೇಳಿದ್ದು. ಬಾರದ ನಗುವನ್ನು ಬರಿಸಿಕೊಂಡು ಕೈಬೀಸಿ ಒಳಗೆ ಬಂದಳು.

"ಅತ್ತಿಗೇ,'' ಮೈದುನ ಕೂಗುತ್ತಿರುವುದು ಕೇಳಿಸುತ್ತಿದೆ. ಇನ್ನೊಂದು ಹತ್ತು ನಿಮಿಷಕ್ಕೆ ಕಾಲೇಜಿಗೆ ಹೊರಡಬೇಕವನು. ಅಷ್ಟರಲ್ಲಿ ಅವನ ಡಬ್ಬಿ ರೆಡಿ ಮಾಡಬೇಕು
"ಇಗೋ ಬಂದೆ,''
"ಏನತ್ತಿಗೆ, ಒಂದು ಸರಕ್ಕೋಸ್ಕರ ಇಷ್ಟು ತಲೆ ಕೆಡಿಸಿಕೊಂಡಿದ್ದೀರಿ. ನಾನು ಓದು ಮುಗಿಸಿ ಕೆಲಸಕ್ಕೆ
ಸೇರಿಕೊಳ್ತೀನಲ್ಲಾ ಆಗ ಅದಕ್ಕಿಂತ ಭಾರಿಯಾದ ಸರ ಮಾಡಿಸಿಕೊಡ್ತೀನಿ ಸುಮ್ನೆ ತಲೆ ಕೆಡಿಸಿಕೋಬೇಡಿ." ಪೇಲವ ನಗೆ ನಕ್ಕಳು ಶಾರದ. "ಇಲ್ಲಾ ಬಿಡು ಅಣ್ಣ ತಮ್ಮ ಇಬ್ರೂ ಒಂದೇ, ನಿನ್ನಂಥ ಮೈದುನ ಇರುವಾಗ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ?''
"ಬರ್‍ತೀನಿ ಅತ್ತಿಗೆ, ಅದನ್ನೇ ಯೋಚಿಸುತ್ತಾ ಅಳ್ತಾ ಇರ್‍ಬೇಡಿ, ತಿಳೀತಾ? ಬೈ.''
ಬಾಗಿಲು ಹಾಕಿಕೊಂಡು ಒಳಬಂದರೆ ಇಡೀ ಮನೆ ಬಿಮ್ಮೆನ್ನುತ್ತಿದೆ.
ಶ್ರೀಧರ ಯಾವಾಗಲೂ ಅಷ್ಟೇ ತುಂಬಾ ಕೂಲ್. ಯಾವುದನ್ನೂ ಅತಿಯಾಗಿ ಯೋಚಿಸುವುದಿಲ್ಲ. ಯಾವತ್ತು ಯಾವ ರೀತಿ ನಡೆಯುತ್ತೋ ಅದೇ ರೀತಿ ಸ್ವೀಕರಿಸೋದು ಅವನ ಸ್ವಭಾವ. ಅತಿಯಾದ ಆಸೆಗಳಿಲ್ಲ, ಕನಸುಗಳಿಲ್ಲ, ಏನಿರುತ್ತೋ ಎಷ್ಟಿರುತ್ತೋ ಅಷ್ಟರಲ್ಲಿ ತೃಪ್ತ. ಹಾಗೆ ನೋಡಿದರೆ ಅವನ ತಮ್ಮನೂ ಅಷ್ಟೆ.ಸರ ಕಳೆದುಹೋದಾಗಲೂ ಅಷ್ಟೆ. ಗಂಡನ ಸ್ನೇಹಿತನ ತಂಗಿಯ ಮದುವೆ ರಿಸೆಪ್ಷನ್ ಮುಗಿಸಿಕೊಂಡು ಬಂದು ರಾತ್ರಿಯುಡುಪು ಬದಲಿಸುತ್ತಿದ್ದಂತೆಯೇ ಕುತ್ತಿಗೆಯಲ್ಲಿ ಸರ ಕಾಣಿಸಲಿಲ್ಲ ತಕ್ಷಣ ಗಾಬರಿಯಾಗಿದ್ದೇನೋ ನಿಜ. ತಡಿ, ರೇಶ್ಮೆ ಸೀರೆ ಬಿಚ್ಚಿಹಾಕಿದಾಗಲೋ, ತಲೆಯ ಹೂವು ತೆಗೆದಿರಿಸುವಾಗಲೋ ಇಲ್ಲೇ ಎಲ್ಲೋ ಬಿದ್ದಿರಬೇಕು, ಎಂದು ಹುಡುಕಿದರೆ ಎಲ್ಲೂ ಇಲ್ಲ. ಗಾಡಿ ನಿಲ್ಲಿಸಿದ್ದ ಜಾಗವೂ ನೋಡಿಯಾಯತು. ಮದುವೆ ಮನೇಲೇನಾದರೂ ಬಿತ್ತೋ ಎಂಬ ಗಂಡನ ಪ್ರಶ್ನೆಗೆ ಶಾರಿ ಉತ್ತರ ಕೊಟ್ಟಿದ್ದು ಸ್ಪಷ್ಟವಾಗಿ, "ಇಲ್ಲಾರಿ, ಕೊನೇಗೆ ಆಚೆ ಕಡೆ ಹುಡುಗೀರು ನಿಂತುಕೊಂಡು ಅರಿಶಿನ, ಕುಂಕುಮ, ತಾಂಬೂಲ ಕೊಟ್ರಲ್ಲಾ ಆಗ ಅರಿಶಿನ ಕುಂಕುಮ ತೆಗೆದುಕೊಂಡು ತಾಳಿಗೂ ಹಚ್ಚಿಕೊಂಡಿದ್ದು ಚೆನ್ನಾಗಿ ನೆನಪಿದೆ. ಆಗ ಖಂಡಿತಾ ತ್ತು.
"ಹಾಗಾದರೆ, ಕೊಂಡಿಯೇನಾದರೂ ಸಡಿಲವಾಗಿ ದಾರಿಯಲ್ಲೇನಾದರೂ ಬಿತ್ತೋ ಏನೋ ಹಾಗೂ ಒಂದೆರಡು ಕಿ.ಮೀ. ದೂರದವರೆಗೂ ಗಾಡಿಯನ್ನು ತೆಗೆದುಕೊಂಡು ಹೋಗಿ ನೋಡಿದರು. ಎಲ್ಲಿ ಎಂದು ಹುಡುಕೋಣ, ಒಟ್ಟು ಎಂಟು ಕಿ.ಮೀ. ದೂರ ಹೋಗಿದ್ದು, ಎಷ್ಟು ಜನ ಓಡಾಡಿರ್‍ತಾರೋ ಏನೋ.
''ಇಡೀ ರಾತ್ರಿ ಶಾರದಾ ಅಳುತ್ತಿದ್ದಳು, ಹೇಳುವಷ್ಟು ಹೇಳಿ ನಿದ್ರೆ ಮಾಡಿದ ಶ್ರೀಧರ. ತಾನು ಮಾತ್ರ ನಿನ್ನೆ ಇಡೀದಿನ ಮಲಗಿಕೊಂಡೇ ಇದ್ದೆ. ಇವತ್ತು ಬಲವಂತವಾಗಿ ಎದ್ದು, ಏನೋ ಒಂದಿಷ್ಟು ತಿಂಡಿ ಮಾಡಿದೆ.

ಫೋನ್ ಗುಣಗುಣಿಸಿತು. ಮೈದುನ ಹೋಗಿ ಇನ್ನೂ ೧೫ ನಿಮಿಷವಾಗಿಲ್ಲ ಯಾರಪ್ಪಾ ಇಷ್ಟು ಬೇಗ, ಶ್ರೀಧರ ಇನ್ನೂ ಆಫೀಸ್ ತಲುಪಿರಲ್ಲ. ಹೋಗಿ ಫೋನೆತ್ತಿ ಹಲೋ ಎಂದಾಗ "ಅತ್ತಿಗೇ, ಇಲ್ಲೇ ಬಸ್‌ಸ್ಟಾಪ್ ಹತ್ತಿರ ಒಂದು ಬೂತ್‌ನಿಂದ ಮಾತಾಡ್ತಾ ಇದ್ದೀನಿ, ಬಸ್‌ಸ್ಟಾಪ್ ಹತ್ತಿರ ಒಂದು ಚೀಟಿ ಅಂಟಿಸಿದ್ದಾರತ್ತಿಗೇ, `ನೀವು ಅಮೂಲ್ಯವಾದದ್ದೇನಾದರೂ ಕಳೆದುಕೊಂಡಿದ್ದರೆ ಸಂಪರ್ಕಸಿ, ಎಂದು ಫೋನ್ ನಂ. ಕೊಟ್ಟಿದ್ದಾರೆ, ನನಗೆ ಸಡನ್ನಾಗಿ ನಿಮ್ಮ ಸರವೇ ಇರಬೇಕು ಅನ್ನುಸುತ್ತಿದೆ. ಸರಿ, ಫೋನ್ ಮಾಡೋಣ ಎಂದು ಬಂದರೆ ಇಲ್ಲೂ ಅದೇ ರೀತಿ ಚೀಟಿ. ಅದಕ್ಕೇ ನಿಮಗೆ ತಿಳಿಸುತ್ತಿದ್ದೇನೆ. ಅಲ್ಲಿನ ನಂ. ಕೊಡ್ತೀನಿ ಫೋನ್ ಮಾಡಿ ವಿಚಾರಿಸಿ.'' ಬಡಬಡನೆ ಹೇಳಿದ ಮೈದುನ.
"ಸರ ಅಂತ ಅದರ ಮೇಲೆ ಬರೆದಿಲ್ಲವೇ?'' ತನ್ನ ಪ್ರಶ್ನೆಗೆ ಉತ್ತರಿಸಿದ, "ಇಲ್ಲಾ ಅತ್ತಿಗೆ, `ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದರೆ'' ಎಂದು ಮಾತ್ರ ಬರೆದಿದ್ದಾರೆ.''
ಉದ್ವೇಗದಿಂದ ಎದೆ ಹೊಡೆದುಕೊಳ್ಳತೊಡಗಿತು. ಖಂಡಿತಾ ಅದೇ ಇರಬೇಕು, ಆದರೆ - ನೋಡೋಣ, ಅಳೆದೂ ಸುರಿದೂ ಫೋನ್ ಎತ್ತಿ ಡಯಲ್ ಮಾಡಿದಳು. ಆ ಕಡೆಯಿಂದ
"ಹಲೋ, ರಘುನಾಥ್ ಹಿಯರ್, ವ್ಹಾಟ್ ಕ್ಯಾನ್ ಐ ಡೂ ಫಾರ್ ಯೂ?''' ಆಕಡೆಯ ಧ್ವನಿ ಕೇಳುತ್ತಿದ್ದಂತೆಯೇ ಕಾಲು ಕೈ ನಡುಗಿತು, ತಲೆ ಧಿಮ್ಮೆಂದಿತು.ತಕ್ಷಣ ಫೋನ್ ಇಟ್ಟುಬಿಟ್ಟಳು ಶಾರದ.
ಸ್ವಲ್ಪ ಹೊತ್ತು ಏನೂ ತೋಚದಂತಾಯಿತು.ಅದೇ ಧ್ವನಿ, ಅದೇ ಧ್ವನಿ, ಅವನೇ, ಅವನೇ, ಎಂದು ಹೃದಯ ಹೇಳುತ್ತಿತ್ತು.`ಉಹುಂ, ಅವನಲ್ಲ, ನನ್ನ ಭ್ರಮೆ ಇರಬೇಕು, ಅದೇ ಹೆಸರಿನ ವ್ಯಕ್ತಿಗಳು ಎಷ್ಟಿರಲ್ಲ? ಹೆಸರು ಕೇಳಿದ ತಕ್ಷಣ ನನಗೆ ಅವನೇ ಅನ್ನಿಸಿತೇನೋ?' ಎಂದು ಬುದ್ಧಿ ಹೇಳಿತು. `ಇಲ್ಲ, ಅವನೇ, ಅವನ ಧ್ವನಿ ಇನ್ನೂ ನನ್ನ ಹೃದಯದಲ್ಲಿ ಅಚ್ಚೊತ್ತಿದಂತಿದೆ. ಇನ್ನೂ ನಿನ್ನೆ ಮೊನ್ನೆಯಂತಿದೆ ಕೇಳಿ, ಖಂಡಿತಾ ಅವನೇ.' ಹೃದಯ ಹೇಳಿತು. ಹೃದಯ ಬುದ್ಧಿಗಳೆಡರ ಸಂಘರ್ಷದಲ್ಲಿ ಹಣ್ಣಾದಳು. ಸರ ಕಳೆದುಕೊಂಡಿದ್ದರ ನೆನಪು ಹಿಂದೆ ಸರಿಯಿತು ಸಂಜೆಯ ತನಕ ಮಂಕಾಗಿ ಕುಳಿತಲ್ಲಿಯೇ ಕುಳಿತಿದ್ದಳು. ಸಂಜೆ ಮೈದುನ ನಾಲ್ಕೂವರಗೆ ಬರುತ್ತಾನೆ, ಗಂಡ ಐದರ ಹೊತ್ತಿಗ ಬರುತ್ತಾರೆ.ಶ್ರೀಧರ ಬರುವ ಹೊತ್ತಿನಲ್ಲೂ ಮೈದುನ ಒತ್ತಾಯಿಸುತ್ತಲೇ ಇದ್ದ, "ಯಾಕತ್ತಿಗೆ, ನಿನ್ನೆಯೆಲ್ಲಾ ಅಷ್ಟು ಒದ್ದಾಡಿದಿರಿ, ಕೊನೇಪಕ್ಷ ಫೋನ್ ಮಾಡಿ ವಿಚಾರಿಸಲಿಲ್ಲವೇಕೆ?'
"ಇಲ್ಲ ರವೀ, ಸರ ಕಳೆದದ್ದೆಲ್ಲೋ, ಈ ಚೀಟಿ ಅಂಟಿಸಿರುವುದೆಲ್ಲೋ, ಇಷ್ಟಕ್ಕೂ ಅಂಥ ಸರ ಯಾರ ಕೈಲಾದರೂ ಸಿಕ್ಕರೆ ಅಷ್ಟು ಸುಲಭವಾಗಿ ಕೊಟ್ಟುಬಿಡುತ್ತಾರಾ?''
ಶ್ರೀಧರ ಏನೆಂದು ವಿಚಾರಿಸಿದರು. ತಮ್ಮ ಹೇಳಿದ್ದರಲ್ಲೂ ನಿಜವಿದೆ ಎನಿಸಿತು. "ಹೌದು ಶಾರಿ, ಫೋನ್ ಮಾಡಿ ಯಾಕೆ ಕೇಳಬಾರದು? ಅಕಸ್ಮಾತ್ ಇಲ್ಲಾ ಅಂದ್ಕೋ, ವಿಚಾರಿಸಿದ ತೃಪ್ತಿನಾದ್ರೂ ಸಿಗುತ್ತಲ್ಲಾ?''
"ಇಲ್ಲಾರೀ, ಇದು ಖಂಡಿತಾ ಸರವಲ್ಲ, ಪರ್ಸೊ, ಸರ್ಟಿಫಿಕೇಟೋ, ಇಲ್ಲಾ ಪಾಸ್‌ಪೋರ್ಟೋ ಹೀಗೆ ಏನಾದರೂ ಕಳೆದುಕೊಳ್ತಾನೇ ಇರ್‍ತಾರಲ್ಲ, ಆರೀತಿ ಏನಾದರೂ ಇರಬೇಕು.
''ನಿಜಕ್ಕೂ ಅಣ್ಣ ತಮ್ಮಂದಿರಿಬ್ಬರಿಗೂ ತುಂಬಾ ಆಶ್ಚರ್ಯವಾಯಿತು. ಇದೇ ಶಾರಿಯೇ, ರಾತ್ರಿ ಕತ್ತಲಲ್ಲಿ ಗಂಡನನ್ನು ಒಂದೆರಡು ಕಿ.ಮೀ. ಓಡಾಡಿಸಿ ಹುಡುಕಾಡಿದ್ದು, ಇಡೀ ರಾತ್ರಿ ಸರ್ವಸ್ವವೂ ಹೋದಂತೆ ಅತ್ತಿದ್ದು? ನಿನ್ನೆಯೆಲ್ಲಾ ತಾನಷ್ಟು ಸಮಧಾನ ಪಡಿಸಿದರೂ ಅಳುತ್ತಿದ್ದುದು? ಇದೀಗ ಏನೋ ಅಕಸ್ಮಾತ್ ದಾರಿ ದೀಪದಂತೆ ಈ ಚೀಟಿ ಕಾಣಿಸಿದರೆ, ಬಹುಶಃ ಅದರಿಂದ ನಮಗೇನೂ ಉಪಯೋಗವಾಗದಿರಲೂಬಹುದು,
ಆದರೂ ಈ ಸಂದರ್ಭಕ್ಕೆ ಹೋಲಿಸಿದರೆ ನಮಗಾಗಿಯೇ ಅಂಟಿಸಿದಂತಿದೆ. ಅಂಥದ್ದರಲ್ಲಿ ಫೋನ್ ಮಾಡಿ ವಿಚಾರಿಸಲು ಏಕೆ ಹಿಂಜರಿಯುತ್ತಿದ್ದಾಳೆ? ಏನೂ ಅರ್ಥವಾಗಲಿಲ್ಲ ಶ್ರೀಧರನಿಗೆ.
ಕಾಫಿ ತಿಂಡಿ ಮುಗಿಸಿ ರವಿ ತಿರುಗಾಡಲು ಹೊರಟ. ದಾರಿಯಲ್ಲಿ ಒಂದು ಯೋಚನೆ ಬಂತು. ಹೇಗೂ ನಂಬರ್ ಇದೆ .ನಾನೇ ಏಕೆ ವಿಚಾರಿಸಬಾರದು? ಫೋನ್ ಎತ್ತಿ ನಂಬರ್ ಡಯಲ್ ಮಾಡಿದ.
******
ಬೆಳಿಗ್ಗೆಯಿಂದ ಯಾರೂ ಸರದ ಬಗ್ಗೆ ವಿಚಾರಿಸಲಿಲ್ಲ ಎಂದು ಗಂಡನಿಂದ ಖಾತ್ರಿ ಮಾಡಿಕೊಂಡು ಕಾಫಿ
ಕುಡಿಯುತ್ತಿದ್ದಾಗ ಫೋನ್ ಟ್ರಿಣ್‌ಗುಟ್ಟಿತು. `ಹಲೋ' ಎಂದಾಗ ಅತ್ತಲಿಂದ ಧ್ವನಿ ಕೇಳಿಸಿತು,
"ನಮಸ್ಕಾರ ಮ್ಯಾಡಂ ನಾನು ರವಿ ಅಂತ , ಬೆಳಿಗ್ಗೆ ಬಸ್‌ಸ್ಟಾಪಿನಲ್ಲಿ ಅಂಟಿಸಿದ ಚೀಟಿ ನೂಡಿ ಫೋನ್
ಮಡುತ್ತಿದ್ದೇನೆ.''
ತಕ್ಷಣ ಜಾಗೃತಳಾದೆ. ವನಜ ಹೇಳಿದ್ದಳು, `ಯಾರೇ ಫೋನ್ ಮಾಡಿ ವಿಚಾರಿಸಿದರೂ ಸಿಕ್ಕಿರುವುದೇನು ಎಂದು ನೀನಾಗೇ ಬಾಯಿ ಬಿಡಬೇಡ. ಕಳೆದಿರುವುದು ಏನು ಎಂದು ಅವರಿಂದಲೇ ತಿಳಿದುಕೋ.'
"ಹೇಳಿ, ಏನು ಫೋನ್ ಮಾಡಿದ್ದು.''

"ಮೇಡಂ ನಮ್ಮ ಅತ್ತಿಗೇದು,'' ಎಂದು ಪ್ರಾರಂಭಿಸಿ, ತಕ್ಷಣ "ಸಾರಿ, ನಾವು ಇದೇ ಏರಿಯಾದ ೧೨ನೇ ಮೇನ್, ೧೦ನೇ ಕ್ರಾಸ್‌ನಲ್ಲಿದ್ದೇವೆ. ಮೊನ್ನೆ ರಾತ್ರಿ ನಮ್ಮ ಅತ್ತಿಗೇದು ಮಾಂಗಲ್ಯದ ಸರ ಕಳೆದುಹೋಯಿತು. ಆಗಲಿಂದ ಅಳುತ್ತಲೇ ಇದ್ದಾರೆ. ಇಂದು ಬೆಳಿಗ್ಗೆ ಬಸ್‌ಸ್ಟಾಪಿನಲ್ಲಿ ಅಂಟಿಸಿದ್ದ ಚೀಟಿ ನೋಡಿ ನಿಮಗೆ ಸಿಕ್ಕಿದೆಯೇನೋ ಎಂದು ಫೋನ್ ಮಾಡುತ್ತಿದ್ದೇನೆ.''

ಒಂದು ಕ್ಷಣ ಯೋಚಿಸಿದೆ, ಹುಡುಗ ಇನ್ನೂ ೧೯-೨೦ರ ವಯಸ್ಸು, ಅತ್ತಿಗೆಯ ಸರ ಎನ್ನುತ್ತಿದ್ದಾನೆ. ಹೇಗೋ ಏನೋ ಎಂದು ಎಚ್ಚರಿಕೆಯಿಂದ ಮಾತನಾಡಿದೆ. "ನೋಡಿ ರವಿ, ದಯವಿಟ್ಟು ನಿಮ್ಮ ಅತ್ತಿಗೆಗೇ ಫೋನ್ ಮಾಡಲು ಹೇಳಿ. ನಾನು ಅವರೊಂದಿಗೆ ಮಾತನಾಡಲು ಇಷ್ಟಪಡುತ್ತೇನೆ.''
"ಹಾಗಾದರೆ ಸಿಕ್ಕಿರುವುದು ಮಾಂಗಲ್ಯದ ಸರವೇ ಎಂದು ನಂಬಲಾ? ಹುಡುಗ ಕಾತುರದಿಂದ ಕೇಳುತ್ತಿರುವುದು ನೋಡಿದರೆ ಒಳ್ಳೇ ಸಂಭಾವಿತರ ಮನೆಯವರಂತೇ ಇದೆ. ಆದರೂ ಮಾತಿಗೆ ಸಿಕ್ಕಿಕೊಳ್ಳಬಾರದೆಂದು "ದಯವಿಟ್ಟು ನಿಮ್ಮ ಅತ್ತಿಗೆಗೆ ನನ್ನೊಂದಿಗೆ ಮಾತನಾಡಲು ಹೇಳಿ'' ಎಂದು ಫೋನ್ ಇಟ್ಟುಬಿಟ್ಟೆ.
ಆ ಹುಡುಗ ಮನೆಗೆ ಹೋಗಿ ಅತ್ತಿಗೆಯೊಂದಿಗೆ ಹೇಳುತ್ತಾನೆ, ನಿಜವಾಗಿದ್ದರೆ ನೋಡೋಣ, ವಿವರಗಳನ್ನು ಕೇಳಿದರಾಯಿತು ಎಂದು ಕೊಂಡೆ.
ರಘುವಿಗೆ ಹೇಳಿದಾಗ "ಸಧ್ಯ ಆದಷ್ಟು ಬೇಗ ಅದರಿಂದ ಬಿಡುಗಡೆ ಆದರೆ ಸಾಕು, ಯಾರದ್ದೋ ಒಡವೆ ಇಟ್ಟುಕೊಂಡು ಸುಮ್ಮನೆ ತಲೆನೋವೇಕೆ?'' ಎಂದರು. ಮತ್ತೆ ಸಂಜೆ ಏಳು ಘಂಟೆಗೆ ಫೋನ್ ಬಂತು. "ಹಲೋ,''
"ನಮಸ್ಕಾರ, ನಾನು ಶ್ರೀಧರ್ ಅಂತ ಇದೇ ಬಡಾವಣೇಲಿ ೧೦ನೇ ಮೇನ್‌ನಲ್ಲಿದ್ದೀವಿ. ಮೊನ್ನೆ ರಾತ್ರಿ ಸುಮಾರು ೧೦ ಗಂಟೆ ಹೊತ್ತಿನಲ್ಲಿ ಮದುವೆ ಮುಗಿಸಿಕೊಂಡು ಬರೋವಾಗ ನನ್ನ ಹೆಂಡತಿಯ ಪಾಲಿಗೆ ಅತ್ಯಮೂಲ್ಯವಾದ ಮಾಂಗಲ್ಯದ ಸರ ಕಳೆದುಹೋಯಿತು. ನಿಮಗೆ ಸಿಕ್ಕಿರುವ ವಸ್ತು ಅದೇ ಆಗಿದ್ದರೆ ಅದರ ಮಾಹಿತಿ ನೀಡೋಣವೆಂದು ಫೋನ್ ಮಾಡಿದೆ. ''
"ನಮಸ್ಕಾರ, ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ, ನಮ್ಮಿಂದ ಯಾವ ತಪ್ಪೂ ಆಗಬಾರದಲ್ವಾ? ಅದರಿಂದ
ಕೇಳುತ್ತಿದ್ದೇನೆ, ವಿವರ ಕೊಡಿ.''
"೩೬ ಗ್ರಾಂ ತೂಕದ ಸರ ಅದು, ೨ ಮಾಂಗಲ್ಯಗಳಿವೆ, ಆಚೆ ಈಚೆ ಎರಡು ಕರೀಮಣಿ ಅದರ ಪಕ್ಕ ಮಾಂಗಲ್ಯಗಳು, ಎರಡು ಮಾಂಗಲ್ಯದ ನಡುವೆ ೨ ಹವಳ ಮತ್ತು ೧ ಕರೀಮಣಿ ಇದೆ.''
"ಸರಿ, ನಿಮ್ಮವರನ್ನು ಕರೆದುಕೊಂಡು ಬನ್ನಿ.''
"ಯಾವಾಗ ಬರಲಿ ಮೇಡಂ?''
"ನೋಡಿ, ಬೇಕಿದ್ದರೆ ಇವತ್ತೇ ಬನ್ನಿ, ಇಲ್ಲಾ ನಾಳೆಯಾದರೆ ಬೆಳಿಗ್ಗೆ ನಾನು ಕೆಲಸಕ್ಕೆ ಹೋಗುತ್ತೀನಿ ನಮ್ಮ
ಯಜಮಾನರು ಮನೇಲೇ ಇರ್‍ತಾರೆ, ನಿಮಗೆ ಯಾವಾಗ ಅನುಕೂಲ ಆಗುತ್ತೋ ಆಗ ಬನ್ನಿ.''
"ತುಂಬಾ ಥ್ಯಾಂಕ್ಸ್ ಮೇಡಂ, ಶಾರದ ಮೊನ್ನೆ ರಾತ್ರಿಯಿಂದ ಸಿಕ್ಕಾಪಟ್ಟೆ ತಲೆಕೆಡಿಸಿಕೊಂದಿದ್ದಾಳೆ. ಏನೋ ದೇವರ ದಯದಿಂದ ನಿಮ್ಮಂಥವರ ಕೈಗೆ ಸಿಕ್ಕಿದ್ದು ನಿಜವಾಗಿಯೂ ನಮ್ಮ ಪುಣ್ಯ, we are very much grateful to you.''

"ಅದೆಲ್ಲಾ ಇರಲಿ ಪರವಾಗಿಲ್ಲ, ಯಾವಾಗ ಬರ್‍ತೀರಿ?''
"ನನ್ನ wife ಜೊತೆ ಮಾತನಾಡಿ ಸಾದ್ಯವಾದರೆ ಇವತ್ತೇ ಬರ್‍ತೀವಿ, ಇಲ್ಲವಾದರೆ ನಾಳೆ ಬರ್‍ತೀವಿ ತೊಂದರೆಯಿಲ್ಲ ತಾನೆ?''
"ಖಂಡಿತಾ ತೊಂದರೆ ಇಲ್ಲ.''
ದೊಡ್ಡ ಭಾರ ಇಳಿದಂತಾಯಿತು ನನಗೆ.
*****
ನಿಜವಾಗಿಯೂ ದೊಡ್ಡ ಬಂಡೆಯೊಂದು ಎದೆಯ ಮೇಲೆ ಕೂತಂತಾಯಿತು.ಶ್ರೀಧರ ಮಾತನಾಡಿದ ರೀತಿಯಿಂದಲೇ ಆಕಡೆಯ ಸಂಭಾಷಣೆ ಪೂರ್ತಿ ಗೊತ್ತಾಯಿತು. ಮಾತನಾಡಿದ್ದು ಹೆಂಗಸರ ಜೊತೆ ಎಂದಂತೂ ತಿಳಿಯಿತು. ಆದರೆ ಆಕೆಯ status ಏನೋ? ಬೆಳಿಗ್ಗೆ ಮಾತನಾಡಿದ ವ್ಯಕ್ತಿ ನಿಜವಾಗಿಯೂ ಅದೇ ರಘೂನಾ? ಈಕೆಗೂ ಆತನಿಗೂ ಏನು ಸಂಬಂಧ? ತಲೆ ಕೆಟ್ಟಂತಾಯಿತು. ಆದಷ್ಟೂ ಸಹಜವಾಗಿರಲು ಪ್ರಯತ್ನಿಸುತ್ತಾ ಕೇಳಿದೆ, "ನಮ್ಮ ಸರವೇನಾ ಸಿಕ್ಕಿರೋದು, ಏನು ಹೇಳಿದರು ಆಕೆ?''
"ಶಾರಿ, ನಮ್ಮದೃಷ್ಟ ಒಳ್ಳೇದು. ಸಧ್ಯ ಕಳೆದುಹೋದ ವಸ್ತು ಈ ಕಾಲದಲ್ಲಿ ಸಿಕ್ಕೋದೂ ಉಂಟಾ? ಅಂಥವರಿಗೆ ಸಿಕ್ಕಿದ್ದು ನಮ್ಮ ಪುಣ್ಯ ಅಷ್ಟೆ. ಹೊರಡೋಣವಾ?''
"ಇಷ್ಟು ಹೊತ್ತಿನಲ್ಲಾ, ಮಳೆ ಬೇರೆ ಬರೋ ಹಾಗಿದೆ, ಇನ್ನೂ ರಾತ್ರಿ ಅಡಿಗೇನೂ ಆಗಿಲ್ಲ.''
"ಹಾಗಾದ್ರೆ ಏನು ಮಾಡೂಣ? ಆಕೆ ಬೆಳಿಗ್ಗೆ ಹೊತ್ತು ಮನೇಲಿರಲ್ಲವಂತೆ, ಕೆಲಸಕ್ಕೆ ಹೋಗ್ತಾರಂತೆ. ಹಾಂ, ಆಕೆ ಗಂಡ ಮನೇಲಿ ಇರ್‍ತಾರೆ ಅಂತ ಹೇಳಿದ್ರು. ನೋಡಿದರೆ ಒಳ್ಳೆ, ಸಂಭಾವಿತರೇ. ಒಂದು ಕೆಲಸ ಮಾಡು, ನಾಳೆ ನಾವಿಬ್ಬರೂ ಹೋದಮೇಲೆ ಒಂದು ಆಟೋ ಮಾಡಿಕೊಂಡು ಹೋಗಿ ಬರ್‍ತೀಯಾ?''
ಎದೆ ಡವಡವ ಎಂದು ಹೊಡೆದುಕೊಳ್ಳತೊಡಗಿತು. ಆಕೆ ಕೆಲಸಕ್ಕೆ ಹೋಗಿ ಗಂಡಸು ಮನೇಲಿರ್‍ತಾರೆ, ಅಂದರೆ, - ಅಂದರೆ?
"ಏನು ಯೋಚಿಸ್ತಿದ್ದೀಯ?''
"ಸರಿ ನೋಡೋಣ, ನಾಳೆ ಆದರೆ ನಾನು ಹೋಗಿ ನೋಡ್ತೀನಿ. ಸಾಧ್ಯವಾಗಲಿಲ್ಲ ಅಂದರೆ ಸಂಜೆ ಹೋಗೋಣ.''
ಶ್ರೀಧರ ಜಾಸ್ತಿ ಮಾತಿನವರಲ್ಲ, ಆದರೆ ಸರಕ್ಕಾಗಿ ಆತುರವಾಗಿ ಈಕ್ಷಣ ನಾನು ಹೊರಡದಿರುವುದು ಅವರಿಗೆ ಅಚ್ಚರಿಯಂತೂ ಖಂಡಿತಾ ಆಗಿದೆ.
ರಾತ್ರಿ ಊಟಕ್ಕೆ ಕುಳಿತಾಗ ಅಣ್ಣ ತಮ್ಮಂದಿರಿಬ್ಬರೂ ಅವರ ಬಗ್ಗೆ ಒಳ್ಳೆ ಮಾತನಾಡುತ್ತಾ, "ಅವರ ಮನೆಗೆ ಬರಿಕೈಲಿ ಹೋಗುವುದು ಬೇಡ, ಏನಾದರೂ ಉಡುಗೊರೆ ಕೊಡೋಣ, ಕೊನೇ ಪಕ್ಷ ನಮ್ಮ ತೃಪ್ತಿಗೆ, ಏನನ್ನುತ್ತೀ?'' ಎಂದು ತನ್ನೆಡೆಗೆ ನೋಡಿದರೆ "ಹಾಂ, ಹೌದು'' ಎಂದು ಉತ್ತರಿಸಬೇಕಾಯಿತು."ಅತ್ತಿಗೆ, ಇನ್ನಾದರೂ ನೆಮ್ಮದಿಯಿಂದ ಊಟ ಮಾಡಿ.'' ಮೈದುನ ಉಪಚರಿಸಿದ.ಶಾರಿಗೆ ನಿಜವಾಗಿ ಏಕಾಂತ ಬೇಕಿತ್ತು. ಯೋಚಿಸಬೇಕಿತ್ತು, ಯಾರ ಪ್ರಶ್ನೆಗಳಿಲ್ಲದೆ, ಯಾರ ಪ್ರಶ್ನಾರ್ಥಕ ನೋಟಗಳಿಲ್ಲದೇ. ಬೇಗ ಕೆಲಸ ಮುಗಿಸಿ ರೂಮಿನ ದೀಪವಾರಿಸಿಬಿಟ್ಟಳು. `ಆಕೆಯ ಗಂಡನೇನಾ ಬೆಳಿಗ್ಗೆ ಮಾತನಾಡಿದ್ದು, ಅಂದರೆ ಆತ ಅದೇ ರಘುವೇನಾ?'
ನೆನಪುಗಳು ಸಾಯುವುದಿಲ್ಲ, ಮರೆಯಾಗುವುದೂ ಇಲ್ಲ, ಮದುವೆಯಾದ ಹೊಸದರಲ್ಲಿ ಶ್ರೀಧರ ಪಕ್ಕದಲ್ಲಿರುವಾಗ ರಘುವಿನ ನೆನಪು ತುಂಬಾ ಬರುತ್ತಿತ್ತು. ನಾನು ತಪ್ಪು ಮಾಡುತ್ತಿರುವೆನಾ? ಎಂದು ತುಂಬಾ ಅನಿಸುತ್ತಿತ್ತು.ಇನ್ನೂ ನಿನ್ನೆ ಮೊನ್ನೆ ನಡೆದಂತಿದೆ.ಆಗಿನ್ನೂ ಕಾಲೇಜಿಗೆ ಸೇರಿದ ಹೊಸತು. ಹುಡುಗಿಯರೂ ಹುಡುಗರೂ ಒಟ್ಟಿಗೆ ಓದುವ ಕಾಲೇಜು.ಅದು ಹೇಗೋ ತನಗಿಂತಲೂ ಮೂರು ವರ್ಷ ಮುಂದಿದ್ದ ರಘುವಿನಿಂದ ಸೆಳೆಯಲ್ಪಟ್ಟೆ. ನಮ್ಮಿಬ್ಬರ ಸುತ್ತಾಟ ನಮ್ಮ ಮನೆಯವರ ಕಣ್ಣಿಗೆ, ಕಿವಿಗೆ ಬೀಳಲು ತಡವಾಗಲಿಲ್ಲ. ದೊಡ್ಡ ರಾಧ್ಧಾಂತವಾಯಿತು. ತಂದೆ ತಾಕೀತು ಮಾಡಿದರು " ಓದಕ್ಕೆ ಅಂತ ಕಾಲೇಜಗೆ ಕಳಿಸಿದರೆ ಯಾವ ಜಾತಿಯೋನ ಜೊತೆ ಸುತ್ತಾಡ್ತೀಯಾ? ಮನೇಲೇ ಬಿದ್ದಿರು.''ಅಣ್ಣಂದಿರು ಬುದ್ಧಿ ಹೇಳಿದರು. " ನೀನಿನ್ನೂ ಚಿಕ್ಕವಳಮ್ಮಾ. ಆ ಹುಡುಗನ ನಡತೆ ಸರಿಯಿಲ್ಲ. ಬೇರೆ ಬೇರೆ ಹುಡುಗಿಯರ ಜೊತೇಲೂ ಹೀಗೇ ಸುತ್ತಾಡ್ತಾನಂತೆ. ಜೊತೆಗೆ ಬೇರೆ ಜಾತಿ ಬೇರೆ. ಅವನನ್ನು ಮರೆತುಬಿಡು.''ರಘು ಬೇರೆ ಹುಡುಗಿಯರ ಜೊತೆ ಸುತ್ತಾಡ್ತಾನೆ ಅನ್ನೋ ವಿಷಯ ನಾನು ನಂಬಲಿಲ್ಲ.
ತನ್ನನ್ನು ಭೇಟಿ ಮಾಡಲು ಬಂದ ಗೆಳತಿಯರ ಕೈಯಲ್ಲಿ ರಘು ಪತ್ರ ಕಳಿಸಿದ್ದು ಅಣ್ಣಂದಿರಿಗೆ ತಿಳಿಯಿತು. ರಘುವಿನ ರೂಮಿಗೆ ಹೋಗಿ ಗಲಾಟೆ ಮಾಡಿ ಬಂದಿರಬೇಕು.ನಾಲ್ಕಾರು ದಿನದ ನಂತರ ಅಣ್ಣಂದಿರಿಲ್ಲದ ಸಮಯದಲ್ಲಿ ನನ್ನ ಆಪ್ತ ಗೆಳತಿಯೊಬ್ಬಳು ಕಾಗದವೊಂದನ್ನು ಅಡಗಿಸಿಕೊಟ್ಟಳು.ಬಚ್ಚಲು ಮನೆಯಲ್ಲಿ ಕಾಗದವನ್ನು ಬಿಡಿಸಿ ಓದಿದೆ. "ನನ್ನನ್ನ್ನು ಮರೆತುಬಿಡು. ಆಸ್ಪತ್ರೆಗೆ ಸೇರಿದ್ದೇನೆ.
ನಿನ್ನನ್ನು ಪ್ರೀತಿಸಿದ್ದಕ್ಕೆ ನಿನ್ನ ಅಣ್ಣಂದಿರಿಂದ ಕಾಲು ಕಳೆದುಕೊಂಡೆ.ಪ್ರಾಣ ಹೋಗದಿದ್ದುದು ಪುಣ್ಯ.
ಆಸ್ಪತ್ರೆಯಿಂದ ನೇರವಾಗಿ ನಮ್ಮೂರಿಗೆ ಹೋಗುತ್ತೇನೆ.
''ಅಂದಿನಿಂದ ಒಳಗೇ ಅಣ್ಣಂದಿರನ್ನು ಧ್ವೇಷಿಸತೊಡಗಿದೆ. ಮೇಲೆ ಮಾತನಾಡುವಷ್ಟು ಧೈರ್ಯವಿರಲಿಲ್ಲ.
ಆ ಊರಿನ ಕಾಲೇಜು ಬಿಟ್ಟು ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಪದವಿ ಪಡೆದೆ.ಮದುವೆ ವಿಷಯ ಬಂದರೆ ಯಾವ ಗಂಡು ಬಂದರೂ ಬೇಡವೆನ್ನುತ್ತಿದ್ದೆ.ಕೊನೆಗೆ ಅಪ್ಪನ ಹಟಕ್ಕಾಗಿ, ಅಮ್ಮನ ಕ್ಷೀಣಿಸುತ್ತಿದ್ದ ಆರೋಗ್ಯದ ದೆಸೆಯಿಂದ, ಜೊತೆಗೆ ಶ್ರೀಧರನ ವ್ಯಕ್ತಿತ್ವವನ್ನು ನೋಡಿ ಮದುವೆಗೆ ಒಪ್ಪಿಕೊಂಡೆ,ಮನದ ಮೂಲೆಯಲ್ಲೆಲ್ಲೋ ಕುಟುಕುತ್ತಿತ್ತು.ಆದರೆ ನಿಧಾನವಾಗಿ `ಆದದ್ದು ಆಗಿ ಹೋಯಿತು, ಇದರಲ್ಲಿ ನಿಜವಾಗಿ ನನ್ನ ತಪ್ಪು ಎಷ್ಟು ಎಂದು ಹೇಗೆ ಹೇಳುವುದು, ಏನೋ ಎಲ್ಲೋ ಆತ ಚೆನ್ನಾಗಿರಲಿ, ನೆಮ್ಮದಿಯಿಂದ ಇರಲಿ ಎಂದು ಹಾರೈಸಿ, ನಿಧಾನವಾಗಿ ಶ್ರೀಧರನೆಡೆಗೆ ಸೆಳೆಯಲ್ಪಟ್ಟೆ.

ಜೊತೆಗೆ ಆಗಿಗೂ ಈಗಿಗೂ ಏಳೆಂಟು ವರ್ಷಗಳ ಬದುಕಿನ ಅನುಭವದ ಮೂಟೆ ಇತ್ತು. ೧೬-೧೭ರಲ್ಲಿ ಹದಿಹರೆಯದ ಆಕರ್ಷಣೆಯ ಪ್ರೀತಿಗೂ ೨೪ರ ಪ್ರಭುದ್ಧತೆಗೂ ವ್ಯತ್ಯಾಸವಂತೂ ಇತ್ತು.' ಆದರೆ ಇದೀಗ ಪುನಃ ನನ್ನ ಸರ ಕಳೆದದ್ದೂ, ಅದೂ ಮಾಂಗಲ್ಯದ ಸರ ಕಳೆದದ್ದೂ, ಮಾಂಗಲ್ಯ ಕಟ್ಟಿಸಿಕೊಳ್ಳಬೇಕೆಂದಿದ್ದವನ ಮನೆಯ ಹೆಂಗಸರಿಗೇ ಸಿಕ್ಕಿದ್ದು, ತುಂಬಾ ಗೋಜಲು ಗೋಜಲೆನಿಸುತ್ತಿದೆ.ಅಕಸ್ಮಾತ್ ಅದೇ ರಘುವಾಗಿರದೇ ಇರಬಹುದು, ಹಾಗಿದ್ದರೆ ಪರವಾಗಿಲ್ಲ.ಹೇಗೆ ಕಂಡುಹಿಡಿಯುವುದು ಅದೇ ರಘುವಾಗಿದ್ದರೆ ಶ್ರೀಧರನೊಂದಿಗೆ ಭೇಟಿಯಾಗುವುದಕ್ಕೇನೋ ಅಳುಕು, ಆತನ ಹೆಂಡತಿಯೇ ಆಕೆಯಾಗಿದ್ದರೆ ಅವಳನ್ನು ಭೇಟಿ ಮಾಡುವುದಕ್ಕೂ ಅಳುಕು.ಕಾಲಿಲ್ಲದವನನ್ನು ಮದುವೆ ಮಾಡಿಕೊಳ್ಳುವಾಗ ಅವನ ಹಿನ್ನೆಲೆಯನ್ನು ತಿಳಿಸದೇ ಇರುತ್ತಾನೆಯೇ?ಮಧ್ಯರಾತ್ರಿಯ ಹೊತ್ತಿಗೆ ಮನಸ್ಸು ಒಂದು ನಿರ್ಧಾರಕ್ಕೆ ಬಂತು. ನಾಳೆ ನಾನೊಬ್ಬಳೇ ಹೋಗುತ್ತೇನೆ. ಅಕಸ್ಮಾತ್ ಅದೇ ರಘುವೇ ಆದರೆ ಒಮ್ಮೆ ಪುನಃ ಪೂರ್ತಿಯಾಗಿ ಕ್ಷಮೆ ಬೇಡಿ ಬರುತ್ತೇನೆ. ಇಷ್ಟು ಕಾಲದ ಮೇಲೆ ಆತನೂ ಘಟನೆಗಳನ್ನು ನಿರ್ವಿಕಾರವಾಗಿ ನೋಡುವಷ್ಟು ಪ್ರಬುದ್ಧನಾಗಿರುತ್ತಾನೆ.
ನನ್ನ ಅಣ್ಣಂದಿರ ತಪ್ಪಿಗೆ ನನ್ನ ಮೇಲೆ ಕೋಪ ತೋರಿಸಲಾರ. ಬೆಳಿಗ್ಗೆ ಕೆಲಸಕ್ಕೆ ಹೊರಡುವಾಗ ಶ್ರೀಧರ ಮತ್ತೆ ಕೇಳಿದರು... "ಏನು ಮಾಡ್ತೀಯಾ? ಈಗಲೇ ಹೋಗ್ತೀಯಾ, ಇಲ್ಲಾ ಸಂಜೆ ಹೋಗೋಣವೋ? ಹೋಗುವುದಾದರೆ ಏನಾದರೂ ಒಂದು ಒಳ್ಳೆ ಉಡುಗೊರೆ ತೆಗೆದುಕೊಂಡು ಹೋಗು.''
"ನೋಡೋಣ, ನಿನ್ನೆ ಮೊನ್ನೆಯಿಂದ ಎಲ್ಲಾ ಕೆಲಸ ಉಳಿದುಬಿಟ್ಟಿದೆ. ಬೇಗ ಮುಗಿದರೆ ಹೋಗಿ ಬರ್‍ತೀನಿ.''
ಮನಸ್ಸು ತೀರ್ಮಾನಿಸಿ ಆಗಿತ್ತು, ಹೇಗಾದರಾಗಲಿ ನೋಡೋಣ ಈ ರಘುನಾಥ್ ಯಾರು ಎಂದು?
ಬೆಲ್ ಮಾಡಿದೆ. ೧೨-೩೦ರ ಸಮಯ ನನ್ನ ಕಿವಿ ಖಂಡಿತಾ ಮೋಸ ಮಾಡಿರಲಿಲ್ಲ.ಕುಂಟುತ್ತಾ ಬಂದು ಬಾಗಿಲು ತೆರೆದದ್ದು ರಘುವೇ ನನ್ನನ್ನು ನೋಡಿ ಆಶ್ಚರ್ಯಗೊಂಡ. ಕಣ್ಣುಗಳು, ತೆರೆದ ಬಾಯಿ ಕೆಲವು
ಸೆಕೆಂಡುಗಳಾದರೂ ಮುಚ್ಚಲಿಲ್ಲ. ನಾನೇ ಕೇಳಬೇಕಾಯಿತು. "ಒಳಗೆ ಬರಬಹುದೇ?''
"ಹಾಂ, ಬಾ, ಬನ್ನಿ, ಇದೇನು ನೀನಿಲ್ಲಿ, ಸಾರಿ.''
"ಪರವಾಗಿಲ್ಲ.''
ಕುಳಿತುಕೊಂಡ ಕೆಲವು ಕ್ಷಣ ಇಬ್ಬರೂ ಮಾತನಾಡಲಿಲ್ಲ. ಕೊನೆಗೆ ರಘು ಕೇಳಿದರು "ನಮ್ಮ ವಿಳಾಸ ಹೇಗೆ ಸಿಕ್ಕಿತು ನಿಮಗೆ, ಈಗೆಲ್ಲಿದ್ದೀರಿ?''
"ಇದೇ ಏರಿಯಾದಲ್ಲೇ, ಮದುವೆಯಾಗಿ ಮೂರು ವರ್ಷವಾಯಿತು. ನನ್ನ ಸರ ನಿಮ್ಮವರ ಕೈಗೆ ಸಿಕ್ಕ ವಿಷಯ ತಿಳಿಯಿತು.''
"ಓ, ಆ ಸರ ನಿಮ್ಮದೇನಾ? ನನ್ನ ಹೆಂಡತಿಗೆ ಬೆಳಿಗ್ಗೆ ವಾಕ್‌ಗೆ ಹೋಗಿದ್ದಾಗ ಸಿಕ್ಕಿತಂತೆ.''
"ರಘು, ನಿನ್ನೆ ಬೆಳಿಗ್ಗೆ ಫೋನ್‌ನಲ್ಲಿ ಧ್ವನಿ ಕೇಳಿದ ತಕ್ಷಣ ನನಗೆ ತಿಳಿಯಿತು ನೀವೇ ಎಂದು. ನನ್ನ ದೆಸೆಯಿಂದ
ನಿಮಗೆ ಈ ಅವಸ್ಥೆ ಬಂತು. ನಿಮ್ಮ ಪತ್ರ ನನ್ನ ಕೈಗೆ ತಲುಪಿದ್ದೇ ತುಂಬಾ ತಡವಾಗಿ. ಆ ಸಮಯದಲ್ಲಿ ನಿಮ್ಮನ್ನು ಒಂದು ಸಲ ಭೇಟಿಯಾಗಬೇಕೆಂದು ತುಂಬಾ ಪ್ರಯತ್ನಪಟ್ಟೆ. ಆದರೆ ಸಾಧ್ಯವಾಗಲೇ ಇಲ್ಲ. ನಮ್ಮಣ್ಣಂದಿರ ತಪ್ಪಿಗೆ ನಾನೆಷ್ಟು ಕೊರಗಿದ್ದೀನೋ? ದಯವಿಟ್ಟು ಕ್ಷಮಿಸುವಿರಲ್ಲವೇ?''
"ಇರಲಿ ಬಿಡು ಹಳೇದ್ಯಾಕೆ ಈಗ. ನಾನೂ ಅದನ್ನೆಲ್ಲಾ ಮರೆತುಬಿಟ್ಟಿದ್ದೀನಿ. ತಡಿ ಸರ ಬೀರುವಿನಲ್ಲಿದೆ, ತರ್‍ತೀನಿ ಇರು.
''ರಘುವಿನ ಧ್ವನಿಯಲ್ಲಿ ಗಲಿಬಿಲಿ ಇತ್ತೇ? ಕುಂಟುತ್ತಾ ನಡೆದ ರಘುವನ್ನು ನೋಡಿ ನೋವಾದರೂ ಮನ ನಿರಾಳವೂ ಆಗಿತ್ತು. "ಇದೇನು ಬಾಗಿಲು ತೆಗೆದಿಕೊಂಡಿದ್ದೀರಾ?'' ಕೇಳುತ್ತಾ ಒಳಗೆ ಬಂದ ಲಕ್ಷಣವಾದ ಹೆಂಗಸು ನನ್ನನ್ನು ನೋಡುತ್ತಿದ್ದಂತೆಯೇ ಪ್ರಶ್ನಾರ್ಥಕವಾಗಿ ನೋಡಿದಳು. ಛೆ, ನಾನು ಇಷ್ಟರಲ್ಲಿ ಹೊರಟುಬಿಡಬೇಕಾಗಿತ್ತು. ನಾನು ವಿಧಿಯಿಲ್ಲದೇ ನಮಸ್ಕಾರ ಹೇಳಿ ಪರಿಚಯಿಸಿಕೊಂಡೆ. ಆಕೆ ತುಂಬಾ ಸ್ನೇಹದಿಂದ ಪಕ್ಕದಲ್ಲಿ ಕುಳಿತು, "ನಿನ್ನೆಯೇ ಬರುತ್ತೀರೆಂದು ಕಾದಿದ್ದೆವು. ಸರ ನನ್ನ ಕೈಗೆ
ಸಿಕ್ಕಿದಾಗಿನಿಂದ, ಸಧ್ಯ ಅದರ ವಾರಸುದಾರರು ಬಂದರೆ ಸಾಕು ಎಂದುಕೋತಿದ್ದೆ. ಬೇರೆಯವರ ಒಡವೆ ಇಟ್ಟುಕೊಳ್ಳುವುದು ಕಷ್ಟ ನೋಡಿ.
''ಯಾರ ಒಡವೆ ಯಾರ ಪಾಲಿಗೋ?ಬಹುಶಃ ರಘು ಬೀರುವಿನಲ್ಲಿ ಹುಡುಕುತ್ತಿದ್ದಾರೆ ಎನಿಸುತ್ತಿದೆ.ಮನಸು ತಡಿಯದೇ ಹೇಳಿದೆ, "ನಿಮ್ಮದೆಷ್ಟು ಒಳ್ಳೆಯ ಮನಸ್ಸು? ಕಾಲಿಲ್ಲದಿರುವವರನ್ನು ಮದುವೆಯಾಗಿ ಅವರಿಗೆ ಒಳ್ಳೇ ಜೀವನ ಕೊಟ್ಟಿದ್ದೀರಿ. ನಿಮ್ಮದು ನಿಜವಾಗಿ ದೊಡ್ಡ ಮನಸು.''
"ನನ್ನನ್ನಷ್ಟು ಹೊಗಳಬೇಡಿ ಶಾರದ, ನಾನೇನಷ್ಟು ದೊಡ್ಡ ಮನಸ್ಸಿನವಳಲ್ಲ. ನಮ್ಮ ಮದುವೆಯಾದಾಗ ಅವರು ಚೆನ್ನಾಗೇ ಇದ್ದರು, ಒಳ್ಳೇ ಕೆಲಸವೂ ಇತ್ತು. ಮದುವೆಯಾದ ೨ ವರ್ಷದ ನಂತರ ಸ್ಕೂಟರಿನಲ್ಲಿ ಬರುವಾಗ ಆಕ್ಸಿಡೆಂಟ್ ಆಗಿ ಕಾಲು ಕೈ ಈ ರೀತಿಯಾಯಿತು. ಏನು ಮಾಡೋದು? ಬಂದದ್ದನ್ನು ಅನುಭವಿಸಲೇಬೇಕಲ್ಲಾ. ಇರಿ ವಿಪರೀತ ತಲೆ ನೋಯುತ್ತಿತ್ತೂಂತ ಅರ್ಧದಿನ ರಜೆ ಹಾಕಿ ಬಂದೆ, ಕಾಫಿ ತರ್‍ತೀನಿ.'' ಎಂದು ಒಳನಡೆದರು.
ನನ್ನ ತಲೆ ಗಿರ್ರೆನ್ನತೊಡಗಿತು,ಅಷ್ಟರಲ್ಲಿ ಸರ ತಂದ ರಘುವಿನ ಮುಖವನ್ನು ದಿಟ್ಟಿಸಿ ನೋಡಿದೆ. ಎತ್ತಲೋ ನೋಡುತ್ತ ಸರವಿದ್ದ ಕೈ ಚಾಚಿದರು. ಕಳೆದುಕೊಂಡಿದ್ದ ಮಾಂಗಲ್ಯದ ಸರವನ್ನು ಕೈನೀಡಿ ತೆಗೆದುಕೊಂಡೆ.
ಇಷ್ಟು ವರ್ಷ ನಿಜವೆಂದು ಕೊಂಡಿದ್ದು ಭ್ರಮೆಯೋ, ಭ್ರಮೆಯೇ ನಿಜವೋ? ಮನಸ್ಸು ಖಾಲಿ ಖಾಲಿಯಾಯಿತು.